ಫೆಡರಲ್ ರಿಸರ್ವ್ ವ್ಯವಸ್ಥೆ -
	ಅಮೆರಿಕ ಸಂಯಕ್ತ ಸಂಸ್ಥಾನದ ಕೇಂದ್ರೀಯ ಬ್ಯಾಂಕಿಂಗ್ ವ್ಯವಸ್ಥೆ. 1913ರ ಫೆಡರಲ್ ರಿಸರ್ವ್ ಅವಧಿ ನಿಯಮದ ಅನ್ವಯ ಆ ವರ್ಷದ ಡಿಸೆಂಬರ್ 13ರಂದು ಸ್ಥಾಪಿತವಾಯಿತು. ಇದಕ್ಕೆ ಮುಂಚೆ ಅಮೆರಿಕದಲ್ಲಿ ಕೇಂದ್ರೀಯ ಬ್ಯಾಂಕಿಂಗ್ ವ್ಯವಸ್ಥೆ ಇರಲಿಲ್ಲ. ಸುಮಾರು ಒಂದು ನೂರು ವರ್ಷಗಳಿಂದ ಅಮೆರಿಕದಲ್ಲಿ ಹಲವಾರು ಬ್ಯಾಂಕುಗಳು ಬೆಳೆದುಬಂದಿದ್ದುವು. 

	ಇಂಗ್ಲೆಂಡ್, ಕೆನಡ ಅಥವಾ ಭಾರತಕ್ಕೂ ಅಮೆರಿಕಕ್ಕೂ ನಡುವೆ ಇರುವ ಒಂದು ಮುಖ್ಯ ವ್ಯತ್ಯಾಸವೆಂದರೆ ಆ ದೇಶಗಳಲ್ಲಿ ಕೆಲವೇ ದೊಡ್ಡ ಬ್ಯಾಂಕುಗಳು ತಲಾ ಹಲವು ನೂರು ಶಾಖೆಗಳೊಂದಿಗೆ ರಾಷ್ಟ್ರವ್ಯಾಪಿಗಳಾಗಿ ಕೆ¯ಸ ಮಾಡುತ್ತಿವೆ; ಅಮೆರಿಕದಲ್ಲಿ ಹಲವಾರು ಸಣ್ಣ ಬ್ಯಾಂಕುಗಳು ಸ್ಥಳೀಯವಾಗಿ ಸ್ಥಾಪಿತವಾಗಿ ಕಾರ್ಯನಿರತವಾಗಿವೆ. ತಕ್ಕಮಟ್ಟಿಗೆ ಈಚಿನ ತನಕವೂ ಅಲ್ಲಿ ಯಾರು ಬೇಕಾದರೂ ಸೀಮಿತ ಬಂಡವಾಳದೊಂದಿಗೆ ಬ್ಯಾಂಕನ್ನಾರಂಭಿಸಬಹುದಿತ್ತು. ಬ್ಯಾಂಕುಗಳನ್ನೆಲ್ಲ ಸ್ಥೂಲವಾಗಿ ಒಂದು ಶಿಸ್ತಿಗೆ ಒಳಪಡಿಸುವ ಕೇಂದ್ರಿಯ ಬ್ಯಾಂಕಿಂಗ್ ವ್ಯವಸ್ಥೆಯೂ ಅಲ್ಲಿರಲಿಲ್ಲ. ಅಮೆರಿಕದಲ್ಲಿ ಬ್ಯಾಂಕುಗಳು ದಿವಾಳಿ ತೆಗೆಯುತ್ತಿದ್ದರೂ ಠೇವಣಿದಾರರು ನಷ್ಟ ಅನುಭವಿಸುತ್ತಿದ್ದುದೂ ಸಾಮಾನ್ಯ. 1873, 1884, 1993 ಮತ್ತು 1907ರಲ್ಲಿ ಸಂಭವಿಸಿದ ಆರ್ಥಿಕ ಬಿಕ್ಕಟ್ಟುಗಳಿಂದ ಬ್ಯಾಂಕಿಂಗ್ ವ್ಯವಸ್ಥೆ ಕುಸಿದು ಧೃತಿಗೆಟ್ಟಿತು. 1907ರ ಆರ್ಥಿಕ ಬಿಕ್ಕಟ್ಟಂತೂ ಬಲು ಉಗ್ರ ಸ್ವರೂಪದ್ದು. ಇದಕ್ಕೆ ಅನೇಕ ಬ್ಯಾಂಕುಗಳು ಬಲಿಯಾದವು. ಖಾಸಗಿ ಬ್ಯಾಂಕಿಂಗ್ ಅನಾಯಕತ್ವ ಹಾಗೂ ಅಸ್ಥಿರತೆಯಿಂದಾಗಿ ದೇಶ ಕಂಗೆಟ್ಟಿತ್ತು. ಈ ಪರಿಸ್ಥಿತಿಯನ್ನು ನಿವಾರಿಸುವುದು ಹೇಗೆಂಬ ಬಗ್ಗೆ ಸುಮಾರು ಆರುವರ್ಷಗಳ ಕಾಲ ತೀವ್ರ ಜಿಜ್ಞಾಸೆಯೇ ಬೆಳೆಯಿತು. ಇದರ ಫಲವೆಂದರೆ 1913ರಲ್ಲಿ ಜಾರಿಗೆ ಬಂದ ಫೆಡರಲ್ ರಿಸರ್ವ್ ಅಧಿನಿಯಮ. 

	1913ರ ಪೂರ್ವದಲ್ಲಿ ಅಮೆರಿಕದಲ್ಲಿ ಬ್ಯಾಂಕಿಂಗ್‍ನಲ್ಲಿ ಯಾವ ನೇರ ಹತೋಟಿ ಅಥವಾ ನಿಯಂತ್ರಣವಿರಲಿಲ್ಲ. ದೇಶದ ಕೋಶಾಗಾgಕ್ಕೆ ಕೇವಲ ಅಧಿಕೃತ ಪ್ರತಿನಿಧಿಗಳಂತಿದ್ದÀ ಪ್ರಥಮ ಬ್ಯಾಂಕ್ (1791-1811) ಮತ್ತು ದ್ವಿತೀಯ ಬ್ಯಾಂಕ್ (1816 -1836)À ಗಳು ಮಾತ್ರ ದೇಶದ ಅಧಿಕೃತ ಚಲಾವಣೆಯಲ್ಲಿರುವ ಹಣವನ್ನು ಬೆಂಬಲಿಸುತ್ತಿದ್ದರು ಹಾಗು ಚಲಾವಣೆಗೆ ತರುತ್ತಿದ್ದರು. ಉಳಿದೆಲ್ಲ ಬ್ಯಾಂಕುಗಳಲ್ಲಿ ಕೆಲವು ಆಗ್ಗೆ ರಾಜಶಾಸನದ ಅನ್ವಯ ವ್ಯವಹರಿಸುತ್ತಿದ್ದವು ಕೆಲವು ಖಾಸಗಿ ವ್ಯಕ್ತಿಗಳಿಂದ ನಡೆಸಲ್ಪಡುತ್ತಿದ್ದವು.  ಬ್ಯಾಂಕುಗಳು ತಮ್ಮದೇ ಆದ ನಾಣ್ಯ.ನೋಟುಗಳನ್ನು ಚಲಾವಣೆಗೆ ತಂದು ಸ್ಪರ್ಧಾತ್ಮಕವಾಗಿ ವ್ಯವಹರಿಸುತ್ತಿದ್ದವು. ಅಮೆರಿಕ ದೇಶವೆಲ್ಲಾ ಸುತ್ತಾಡ ಹೊರಟರೆ ಯಾವ ಬ್ಯಾಂಕು ಯಾವ ನೋಟುಗಳನ್ನು ಚಲಾವಣೇ ಮಾಡುವುದೋ ತಿಳಿಯದೆ ಹೋಗುತ್ತಿತ್ತು. ಕೊನೆಗೆ ಇದೆಲ್ಲವೂ ಸಂಪೂರ್ಣ ಗೊಂದಲಮಯವಾಗಿ ಎಲ್ಲೆಲ್ಲೂ ಅವ್ಯವಸ್ಥೆಯು ತಾಂಡವವಾಡುತ್ತಿತ್ತು.  ಇದರಿಂದ ಹೊರಬರಲು ಸರ್ಕಾರವು 1863ರಲ್ಲಿ ರಾಷ್ಟ್ರೀಯ ಬ್ಯಾಂಕುಗಳನ್ನು ಸ್ಥಾಪಿಸಿತು.  ಬ್ಯಾಂಕುಗಳು ಹೂಡಿರಬೇಕಾದ ಬಂಡವಾಳದ ಮಿತಿ, ವ್ಯವಹಾರದ ನೀತಿ ನಿಯಮಗಳು, ರಾಷ್ಟ್ರೀಯ ಬ್ಯಾಂಕುಗಳಲ್ಲದೆ ಬೇರೆ ಬ್ಯಾಂಕುಗಳ ನೋಟುಗಳ ಚಲಾವಣೆಯ ಮೇಲೆ ಶೇಕಡಾ 10 ರ ಶುಲ್ಕವನ್ನು ವಿಧಿಸಿತು. ಹೀಗೆ ಸರ್ಕಾರವು ಖಾಸಗಿ ಬ್ಯಾಂಕುಗಳ ನೋಟು ಚಲಾವಣೆಗಳ ಮೇಲೆ ಒತ್ತಡ ಹೇರಿ ಹಿಂದೆ ಸರಿಯುವಂತೆ ಮಾಡಿತು.  ದೇಶದ ಆಂತರಿಕ ಹಾಗು ವಿದೇಶ ವ್ಯವಹಾರಗಳು ಹೆಚ್ಚಿದಂತೆಲ್ಲಾ ಈ ಗೊಂದಲವನ್ನು ಪರಿಹರಿಸಲು ಸರ್ಕಾರ 1913ರಲ್ಲಿ ಫೆಡರಲ್ ರಿಸರ್ವ್ ಕಾಯಿದೆ, 1913 ನ್ನು ಜಾರಿಗೆ ತಂದಿತು. ಇದರ ಅನ್ವಯ ಪ್ರಾರಂಭವಾದ ಫೆಡರಲ್ ರಿಸರ್ವ್ ಬ್ಯಾಂಕು ಕೇಂದ್ರೀಯ ಬ್ಯಾಂಕ್ ಆಗಿ ಸ್ಥಾಪಿತವಾಗಿ ಇಡೀ ಅಮೆರಿಕ ದೇಶದ ಬ್ಯಾಂಕಿಂಗ್, ಹಣಕಾಸು, ಆರ್ಥಿಕ ನೀತಿ ಮೊದಲಾದವುಗಳ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿತು.  ಇತರ ದೇಶಗಳಲ್ಲಿರುವಂತೆಯೇ ಇದೂ ಸಹ ದೇಶದ ರಿಸರ್ವ್ ಬ್ಯಾಂಕ್ ಆಗಿದ್ದರೂ ಇತರ ದೇಶಗಳಿಗಿಂತ ಇಲ್ಲಿನ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್ ಬ್ಯಾಂಕಿನ ರೀತಿ-ನೀತಿಗಳು ಕೆಲವು ವಿಶಿಷ್ಟ ಗುಣಲಕ್ಷಣಗಳಿಂದ ಕೂಡಿವೆ.  ಇಡೀ ಅಮೇರಿಕ ದೇಶವನ್ನು ಹನ್ನೆರಡು ವಿಭಾಗಗಳನ್ನಾಗಿ ಮಾಡಿ ಅವುಗಳನ್ನು ಹನ್ನೆರಡು ಫೆಡರಲ್ ರಿಸರ್ವ್ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕುಗಳಾಗಿ ಕಾರ್ಯ ನಿರ್ವಹಿಸುತ್ತವೆ. 

	ಈ ಫೆಡರಲ್ ರಿಸರ್ವ್ ವ್ಯವಸ್ಥೆಯ ಅಡಿಯಲ್ಲಿ ದೇಶವನ್ನು ಹನ್ನೆರಡು ಫೆಡರಲ್ ರಿಸರ್ವ್ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಜಿಲ್ಲೆಗೂ ಒಂದು ಫೆಡರಲ್ ರಿಸರ್ವ್ ಬ್ಯಾಂಕ್ ಇದೆ. ನ್ಯೂಯಾರ್ಕ, ಷಿಕಾಗೋ, ಸ್ಯಾನ್ ಫ್ರಾನ್ಸಿಸ್ಕೊ, ಫಿಲಡೆಲ್ಫಿಯ, ಬಾಸ್ಟನ್, ಕ್ಲೀವ್‍ಲೆಂಡ್, ಸೆಂಟ್‍ಲೂಯಿ, ಕಾನ್ಸಾಸ್ ಸಿಟಿ, ಅಟ್ಲಾಂಟ, ರಿಚ್‍ಮಂಡ್, ಡಲಾಸ್, ಮಿನಿಯಾಪೊಲಿಸ್ ಇವು ಅನುಕ್ರಮವಾಗಿ ಈ ಜಿಲ್ಲಾ ಬ್ಯಾಂಕುಗಳ ಮುಖ್ಯ ಸ್ಥಳಗಳು. ಪ್ರತಿಯೊಂದು ಫೆಡರಲ್ ರಿಸರ್ವ್ ಬ್ಯಾಂಕೂ ಒಂದು ಬಂಡವಾಳ ಸಂಸ್ಥೆ, ವಾಣಿಜ್ಯ ಬ್ಯಾಂಕುಗಳು ಅದರ ಬಂಡವಾಳಕ್ಕೆ ವಂತಿಕೆ ಸಲ್ಲಿಸಿವೆ. ಅವನ್ನು ಸದಸ್ಯ ಬ್ಯಾಂಕುಗಳೆಂದು ಕರೆಯುತ್ತಾರೆ. ಎಲ್ಲ ಹನ್ನೆರಡು ಫೆಡರಲ್ ರಿಸರ್ವ್ ಬ್ಯಾಂಕುಗಳನ್ನೂ ಸಂಯೋಜಿಸುವ, ಸಪ್ತಸದಸ್ಯರಿಂದ ಕೂಡಿದ ಗವರ್ನರುಗಳ ಮಂಡಲಿ ಇದೆ. 

	ಹೀಗೆ ಫಡರಲ್ ರಿಸರ್ವ್ ವ್ಯವಸ್ಥೆ ಒಂದು ವಿಕೇಂದ್ರೀಕೃತ ವ್ಯವಸ್ಥೆ. ಗವರ್ನರರ ಮಂಡಲಿ ನೀತಿಯನ್ನು ರೂಪಿಸುತ್ತದೆ. ವಿವಿಧ ಅಂಗಗಳ ನಡುವೆ ಸಮನ್ವಯ ಸಾಧಿಸುತ್ತದೆ. ಗವರ್ನರರನ್ನು ಸೆನೇಟಿನ ಸಲಹೆಯ ಮೇರೆಗೆ ಅಮೆರಿಕದ ಅಧ್ಯಕ್ಷ ನೇಮಕ ಮಾಡುತ್ತಾನೆ. ಇವರ ಪೈಕಿ ಒಬ್ಬ ಫೆಡರಲ್ ರಿಸರ್ವ್ ವ್ಯವಸ್ಥೆಯ ಅಧ್ಯಕ್ಷ, ಇನ್ನೊಬ್ಬ ಉಪಾಧ್ಯಕ್ಷ ಇವರ ಕಾರ್ಯಾವಧಿ ನಾಲ್ಕು ವರ್ಷ. ವಾಷಿಂಗ್ಟನ್ನಿನಲ್ಲಿ ಇದರ ಕಛೇರಿ ಉಂಟು. 

	ಫೆಡರಲ್ ರಿಸರ್ವ್ ಬೋರ್ಡ್ (ಮಂಡಲಿ) ಅಲ್ಲದೆ ಫೆಡರÀಲ್ ಓಪನ್ ಮಾರ್ಕೆಟ್ ಸಮಿತಿಯೊಂದಿದೆ (ಮುಕ್ತ ಮಾರುಕಟ್ಟೆ ಸಮಿತಿ). ಫೆಡರಲ್ ರಿಸರ್ವ್ ಬೋರ್ಡಿನ ಏಳು ಮಂದಿ ಸದಸ್ಯರೂ, ಹನ್ನೆರಡು ಜಿಲ್ಲೆಗಳ ಐವರು ಪ್ರತಿನಿಧಿಗಳೂ ಇದರ ಸದಸ್ಯರು. ಅಮೆರಿಕದ ಅತ್ಯಂತ ಪ್ರಭಾವಿಗಳಾದ ಖಾಸಗಿ ಪ್ರಜೆಗಳ ಗುಂಪು ಎಂದು ಇದನ್ನು ವರ್ಣಿಸುವುದುಂಟು. ಫೆಡರಲ್ ರಿಸರ್ವ್ ಬ್ಯಾಂಕುಗಳು ಕೊಳ್ಳುವ ಮತ್ತು ಮಾರುವ ಪ್ರತಿಭೂತಿಗಳನ್ನು (ಸೆಕ್ಯೂರಿಟಿ) ಇದು ನಿಯಂತ್ರಿಸುತ್ತದೆ. ಈ ವ್ಯವಸ್ಥೆಗೆ ಒಂದು ಸಲಹಾ ಸಮಿತಿ ಉಂಟು. ಇದರಲ್ಲಿ ಹನ್ನೆರಡು ಜನ ಸದಸ್ಯರಿರುತ್ತಾರೆ, ಪ್ರತಿಯೊಂದು ರಿಸರ್ವ್ ಬ್ಯಾಂಕಿನಿಂದಲೂ ಒಬ್ಬ ಪ್ರತಿನಿಧಿ ಈ ಸಮಿತಿಯಲ್ಲಿರುತ್ತಾನೆ. ತಾತ್ಕಾಲಿಕ ಸ್ಥಿತಿಗತಿಗಳ ಬಗ್ಗೆ ಗವರ್ನರರ ಮಂಡಲಿಗೆ ಸಲಹೆ ನೀಡುವುದು ಇದರ ಹೊಣೆ. 

	ಪ್ರತಿಯೊಂದು ಫೆಡರಲ್ ರಿಸರ್ವ್ ಬ್ಯಾಂಕಿಗೂ ಒಂಬತ್ತು ಮಂದಿ ನಿರ್ದೇಶಕರ ಮಂಡಲಿ ಇರುತ್ತದೆ. ಇವರಲ್ಲಿ ಎ,ಬಿ,ಸಿ ಎಂಬ ಮೂರು ವರ್ಗಗಳಿವೆ. ಎ ವರ್ಗದ ಮೂವರು ನಿರ್ದೇಶಕರನ್ನು ಸದಸ್ಯ ಬ್ಯಾಂಕುಗಳು ಆಯ್ಕೆಮಾಡುತ್ತವೆ. ಬಿ ವರ್ಗದ ಮೂವರು ಉದ್ದಿಮೆ ವಾಣಿಜ್ಯ ಮತ್ತು ಕೃಷಿಯನ್ನು ಪ್ರತಿನಿಧಿಸುತ್ತಾರೆ. ಸಿ ವರ್ಗದ ಮೂವರನ್ನು ಗವರ್ನರರ ಮಂಡಲಿ ನೇಮಕ ಮಾಡುತ್ತಾದೆ. ಈ ಸಿ ವರ್ಗದ ನಿರ್ದೇಶಕರಲ್ಲಿ ಒಬ್ಬ ಆ ಫೆಡರಲ್ ರಿಸರ್ವ್ ಬ್ಯಾಂಕಿನ ಅಧ್ಯಕ್ಷನಾಗಿರುತ್ತಾನೆ. ಇವನ್ನು ಫೆಡರಲ್ ರಿಸರ್ವ್ ಬ್ಯಾಂಕಿನಲ್ಲಿ ಫೆಡರಲ್ ರಿಸರ್ವ್ ವ್ಯವಸ್ಥೆಯ ಅಧಿಕರ್ತೃವಾಗಿ (ಏಜೆಂಟ್) ಕಾರ್ಯ ನಿರ್ವಹಿಸುತ್ತಾನೆ. 

	ಹೀಗೆ ಅಮೆರಿಕದ ಕೇಂದ್ರಿಯ ಬ್ಯಾಂಕಿಂಗ್ ವ್ಯವಸ್ಥೆ ವಿಶಿಷ್ಟವಾದ್ದು, ಇದಕ್ಕೆ ಒಂದೇ ಕೇಂದ್ರಿಯ ಬ್ಯಾಂಕಿಲ್ಲ. ಹನ್ನೆರಡು ಕೇಂದ್ರೀಯ ಬ್ಯಾಂಕುಗಳಿವೆ. ಇವೆಲ್ಲವನ್ನೂ ಸಂಯೋಜಿಸುವ ಮಂಡಲಿಯಿದೆ. ವಿಕೇಂದ್ರೀಕರಣವೇ ಮೂಲ ಉದ್ದೇಶವಾದರೂ ಈ ಬಗೆಯ ವ್ವವಸ್ತೆಯ ರೂಪಣೆಗೆ ಇತರ ಕಾರಣಗಳೂ ಇವೆ. ಅಮೆರಿಕದ ಭೌಗೋಲಿಕ ಪರಿಸ್ಥಿತಿ, ಅಮೆರಿಕದ ದ್ವೈತ ಬ್ಯಾಂಕಿಂಗ್ ವ್ಯವಸ್ಥೆ; ವಾಣಿಜ್ಯ ಬ್ಯಾಂಕಿಂಗ್ ರಚನೆಯ ವೈಶಿಷ್ಟ್ಯ. 

ಫೆಡರಲ್ ಬ್ಯಾಂಕಿನ ಕಾರ್ಯಗಳು:

1. ಅಮೇರಿಕದ ಆರ್ಥಿಕ ನೀತಿಯನ್ನು ರೂಪಿಸುವುದು ಹಾಗು ಅದರನುಗುಣವಾಗಿ ಶಾಸನವನ್ನು ಪರಿಪಾಲಿಸುವುದು.

2. ಬ್ಯಾಂಕುಗಳನ್ನು ಪರಿವೀಕ್ಷಿಸುವುದು, ನಿಯಂತ್ರಿಸುವುದರ ಜತೆಗೆ ಗ್ರಾಹಕರ ಹಕ್ಕು ಬಾಧ್ಯತೆಗಳನ್ನು ರಕ್ಷಿಸುವುದು.

3. ದೇಶದ ಹಣಕಾಸಿನ ಪದ್ಧತಿಯನ್ನು ಯಾವಾಗಲೂ ದೃಢವಾಗಿರುವಂತೆ ನೋಡಿಕೊಳ್ಳುವುದು.

4. ಅಮೆರಿಕ ಸರ್ಕಾರಕ್ಕೆ, ಸಾರ್ವಜನಿಕರಿಗೆ, ಹಣಕಾಸು ಸಂಸ್ಥೆಗಳಿಗೆ, ವಿದೇಶೀ ಹಣಕಾಸು ಸಂಸ್ಥೆಗಳಿಗೆ ಹಣಕಾಸಿನ   ಸೇವೆಗಳನ್ನು ಸಲ್ಲಿಸುವುದು.

5. ದೇಶದಲ್ಲಿನ ವಾಣಿಜ್ಯ ಬ್ಯಾಂಕುಗಳಿಗೆ ಅವಶ್ಯಕವಾದಾಗ ಸಾಲ ನೀಡುವುದು ಮತ್ತು ಸರ್ಕಾರಕ ಅಧಿಕೃತ ಅನುಮತಿಯಂತೆ ಇಡೀ ಅಮೆರಿಕಾಕ್ಕೆ ಅವಶ್ಯವಾದ ಕಾಗದದ ಹಣವನ್ನು ಮುದ್ರಿಸಿ ವಿತರಿಸುವುದು.

	ಫೆಡರಲ್ ರಿಸರ್ವ್ ಬ್ಯಾಂಕಿನ ಸದಸ್ಯತ್ವ: ರಾಷ್ಟ್ರೀಯ ಬ್ಯಾಂಕುಗಳೂ ರಾಜ್ಯ ಬ್ಯಾಂಕುಗಳೂ ಟ್ರಸ್ಟ್ ಕಂಪನಿಗಳೂ ಇದರ ಸದಸ್ಯ ಸಂಸ್ಥೆಗಳು, ರಾಷ್ಟ್ರೀಯ ಬ್ಯಾಂಕುಗಳಿಗೆ ಸದಸ್ಯತ್ವ ಕಡ್ಡಾಯ. 

	ಚಿನ್ನದ ಸರ್ಟಿಫಿಕೇಟುಗಳು, ನಗದು ಹಣ, ವಟ್ಟುಗಳು ಮುಂಗಡಗಳು, ಒಪ್ಪಿಗೆ ಪತ್ರಗಳು, ಅಮೆರಿಕ ಸರ್ಕಾರದ ಪ್ರತಿಭೂತಿಗಳು ಮುಂತಾದವು ಫೆಡರಲ್ ರಿಸರ್ವ್‍ಬ್ಯಾಂಕಿನ ಆಸ್ತಿಗಳು. ಫೆಡರಲ್ ರಿಸರ್ವ್ ನೋಟುಗಳು, ಸದಸ್ಯ ಬ್ಯಾಂಕುಗಳ, ಅಮೆರಿಕದ ಖಜಾನೆಯ, ವಿದೇಶಗಳ ಮತ್ತು ಇತರ ಠೇವಣಿಗಳು ಮುಂತಾದವು ಹೊಣೆಗಳು. 

	ಸರ್ಕಾರದ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವುದು, ವಾಣಿಜ್ಯ ಬ್ಯಾಂಕುಗಳನ್ನು ಸಂಯೋಜಿಸಿ ನಿಯಂತ್ರಿಸುವುದು ಮತ್ತು ರಾಷ್ಟ್ರದ ಹಣ ಸರಬರಾಜನ್ನು ಉದರಿ ಸ್ಥಿತಿಗತಿಗಳನ್ನೂ ಹತೋಟಿಗೆ ಒಳಪಡಿಸಲು ನೆರವಾಗುವುದು ಇದರ ಮುಖ್ಯ ಉದ್ದೇಶಗಳು, ಇವುಗಳ ಪೂರೈಕೆಗಾಗಿ ಇದು ಇತರ ಕೇಂದ್ರೀಯ ಬ್ಯಾಂಕುಗಳು ಪ್ರಯೋಗಿಸುವ ಎಲ್ಲ ಅಸ್ತ್ರಗಳನ್ನೂ ಬಳಸುತ್ತದೆ.
 (ನೋಡಿ- ಕೇಂದ್ರೀಯ-ಬ್ಯಾಂಕು)

	ಫೆಡರಲ್ ರಿಸರ್ವ್ ವ್ಯವಸ್ಥೆ ಅದರ ಸದಸ್ಯತ್ವ ಹೊಂದಿರುವ ವಾಣಿಜ್ಯ ಬ್ಯಾಂಕುಗಳ ಒಡೆತನದಲ್ಲಿರುವ ಸಂಸ್ಥೆಯಾದಾಗ್ಯೂ ವಾಸ್ತವವಾಗಿ ಅದೊಂದು ಸಾರ್ವಜನಿಕ ಅಧಿಕರಣ. ಅದು ಅಮೆರಿಕದ ಕಾಂಗ್ರೆಸ್ಸಿಗೆ ಹೊಣೆಯಾಗಿರುತ್ತದೆ. ಲಾಭ ಸಂಪಾದನೆಗಿಂತ ಸಾರ್ವಜನಿಕ ಹಿತರಕ್ಷಣೆಯೇ ಇದಕ್ಕೆ ಪ್ರಧಾನ. ಸದಸ್ಯ ಬ್ಯಾಂಕುಗಳು ನಿಗಧಿಯಾದ ಲಾಭಾಂಶಗಳನ್ನೇನೋ ಪಡೆಯುತ್ತವೆ, ಒಂದು ಗೊತ್ತಾದ ಮಟ್ಟಕ್ಕಿಂತ ಹೆಚ್ಚಿನ ಲಾಭವನ್ನು ಸರ್ಕಾರಕ್ಕೆ ಹೋಸುತ್ತದೆ. 

	ಫೆಡರಲ್ ರಿಸರ್ವ್ ಗವರ್ನರುಗಳನ್ನು ಹದಿನಾಲ್ಕು ವರ್ಷಗಳ ಅವಧಿಗೆ ಅಮೆರಿಕ ಅಧ್ಯಕ್ಷ ನೇಮಿಸುತ್ತಾನೆ. ವ್ಯವಸ್ಥೆಯ ಅಧ್ಯಕ್ಷನ ನೇಮಕವೂ ಆತನಿಂದಲೇ. ಆದಾಗ್ಯೂ ಅವರು ಕಾಂಗ್ರೆಸ್ಸಿಗೆ ಉತ್ತರವಾದಿಗಳಾಗಿರುತ್ತಾರೆ, ಕಾರ್ಯಾಂಗಕ್ಕಲ್ಲ. ಇದು ಇತರ ಹಲವು ದೇಶಗಳಲ್ಲಿರುವ ಪದ್ಧತಿಗಿಂತ ಭಿನ್ನವಾಗಿದ್ದು, ಬ್ರಿಟನ್ನಿನಲ್ಲೂ ಭಾರತದಲ್ಲೂ ಕೇಂದ್ರಿಯ ಬ್ಯಾಂಕುಗಳು ರಾಷ್ಟ್ರೀಕೃತವಾಗಿವೆ. ಅವು ಸಂಪುಟದ ಸೂಚನೆಗಳಿಗೆ ಬದ್ಧವಾಗಿದ್ದು ಸರಕಾರದ ನೀತಿಗಳೊಂದಿಗೆ ತಮ್ಮ ನೀತಿಗಳನ್ನು ಹೊಂದಿಸಿಕೊಳ್ಳುವುದು ಅಗತ್ಯ. 

	1951ರಲ್ಲಿ ಅಮೆರಿಕದ ಖಜಾನೆ ಇಲಾಖೆಗೂ ಫೆಡರಲ್ ರಿಸರ್ವ್ ವ್ಯವಸ್ಥೆಗೂ ಒಡಂಬಡಿಕೆಯಾಗುವ ಮುನ್ನ ಫೆಡರಲ್ ರಿಸರ್ವ್ ವ್ಯವಸ್ಥೆಯ ಮೇಲೆ ಅಮೆರಿಕದ ಅಧ್ಯಕ್ಷನೂ ಸರ್ಕಾರಕ ಖಜಾನೆಯೂ ಒತ್ತಡ ತರುವುದು ಸಾಮಾನ್ಯವಾಗಿತ್ತು. ಈಗ ಫೆಡರಲ್ ರಿಸರ್ವ್ ವ್ಯವಸ್ಥೆ ಸಾಮಾನ್ಯವಾಗಿ ಅಮೆರಿಕದೊಂದಿಗೆ ಸಹಕರಿಸುವುದಾದರೂ ತನ್ನ ಹೊಣೆ ಇರುವುದು ಕಾಂಗ್ರೆಸ್ಸಿಗೆ ಎನ್ನುವುದು ಅದರ ಧೋರಣೆ.
(ಡಿ.ಎನ್.ಆರ್.)
(ಪರಿಷ್ಕರಣೆ: ಜಿ.ಆರ್.ವಿ; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ